ಓರ್ವ
ಯುವಕ ಬೆಂಗಳೂರಿನ ಒಂದು ಪ್ರಮುಖ ರಸ್ಥೆಯ ಬದಿಯಲ್ಲಿ ನಿಂತಿದ್ದಾನೆ ಅತ್ತಿತ್ತ ನೋಡುತ್ತ
ಹತಾಶ ಭಾವದಲ್ಲಿ.ಅವನು ಅನುಭವಿಸಿದ್ದನ್ನು ನೆನೆದು ಅಳು ಬರುವಂತಾಗಿದೆ ಅವನಿಗೆ.ಆದರೆ
ಅತ್ತರೆ ಸಮಾಧಾನ ಮಾಡಲು ಯಾರು ಇಲ್ಲವಲ್ಲಾ.
ಮನೆಯ ಬಡತನದ ಪರಿಸ್ಥಿತಿಯಿಂದ,
ತನ್ನ ವಿದ್ಯಾಭ್ಯಾಸವನ್ನು ಒಂದು ಹಂತದಲ್ಲೇ ಮೊಟಕುಗೊಳಿಸಿ, ಒಂದು ಉದ್ಯೋಗವನ್ನು
ಅರಸಿಕೊಂಡು ಪಟ್ಟಣದ ಹಾದಿ ಹಿಡಿದಿದ್ದನು.
ಬೇಸರದ ಸಂಗತಿಯೆಂದರೆ ಅವನ ಬಸ್ ಖರ್ಚಿಗೂ ಅವನ
ತಂದೆ ಬೇರೆಯವರಿಂದ ಸಾಲ ಮಾಡಬೇಕಾದ ಪರಿಸ್ಥಿತಿ, ಹೇಗೋ ಯಾರಿಂದಲೋ ಹಣವನ್ನು ಪಡೆದು
ಬೆಂಗಳೂರಿನ ಬಸ್ ಹತ್ತಿದ್ದ ಆತ . ಆ ದಿನವಷ್ಟೇ ಪಟ್ಟಣವನ್ನು ನೋಡಿದ್ದ.!!!!!
ಎಲ್ಲರಿಗೂ ತಿಳಿದ ವಿಷಯವೇ, " ಹಳ್ಳಿ ಮತ್ತು ಪಟ್ಟಣದ ವ್ಯತ್ಯಾಸ ಅಂದರೆ ಇಂಡಿಯಾ ಮತ್ತು
ಭಾರತದ ವ್ಯತ್ಯಾಸದಂತೆ !" (ಈ ಮಾತು ಎಲ್ಲೋ ಓದಿದ್ದೆ ನಾನು), ಯಾರೋ ಹೇಳಿದ್ದರು ಅವನಿಗೆ
ಒಂದು ಉದ್ಯೋಗದ ಬಗ್ಗೆ .ಆದ್ದರಿಂದಲೇ ಗಡಿಬಿಡಿಯಲ್ಲಿ ಬಂದಿದ್ದನವ.
ಅವನಿಗೆ ಬಹಳ
ಪರಿಚಿತರು ಬೆಂಗಳೂರಿನಲ್ಲಿದ್ದರೂ ಅಂದೇ ಸಂದರ್ಶನ ಇದ್ದುದರಿಂದ ಬಸ್ ಇಳಿದವನೇ ಆ ಸ್ಥಳದ
ಬಗ್ಗೆ ಸ್ವಲ್ಪ ವಿಚಾರಿಸಿಕೊಂಡು ಬಿ.ಎಮ್.ಟಿ.ಸಿ ಬಸ್ ಏರಿದ.
ಕಂಡಕ್ಟರ್
ಕೊಟ್ಟ ಟಿಕೆಟ್ ಪಡೆದು ಒಂದೇ ಕಾಲಿನ ಮೇಲೆ ಬಹಳ ಕಷ್ಟ ಪಟ್ಟು ನಿಂತಾಗ, ಅವನ
ದುರಾದೃಷ್ಟಕ್ಕೆ ಯಾವುದೋ ಕಲಾಕಾರ ಅವನ ಪರ್ಸ್ ಹಾರಿಸಿಬಿಟ್ಟಿದ್ದ ! ಇದ್ದ ಸ್ವಲ್ಪ
ದುಡ್ಡೂ ಮತ್ತು ಎಲ್ಲಾ ವಿಳಾಸ ಬರೆದಿದ್ದ ಒಂದು ಸಣ್ಣ ಡೈರಿ ಎಲ್ಲವೂ ಇಲ್ಲವಾಗಿತ್ತು.
ಎಲ್ಲೋ ಒಂದುಕಡೆ ಇಳಿದಾಗ ಅವನಿಗೆ ಈ ವಿಷಯ ಗೊತ್ತಾಯಿತು.ಅಪರಿಚಿತ ಸ್ಥಳ, ಕೈಲಿ
ಪುಡಿಗಾಸೂ ಇಲ್ಲ ,ಎಲ್ಲಿಗೆ ಹೋಗುವುದು ತಿಳಿಯುತ್ತಿಲ್ಲ. ಯಾರಿಗೂ ಬೇಡವಾದ
ಸ್ಥಿತಿಯಿದು.ಬಹಳ ಹಸಿವೆಯೂ ಆಗಿತ್ತವನಿಗೆ.
ಸುಮಾರು ಹೊತ್ತಿನ ನಂತರ ಒಂದು
ನಿರ್ಧಾರ ಮಾಡಿದ.ಹೇಗಾದರೂ ಮಾಡಿ ಮೆಜೆಸ್ಟಿಕ್ ಸೇರುವದು, ಹಣೆಬರಹ ಸರಿ ಇದ್ದರೆ ಯಾರಾದರೂ
ಪರಿಚಯದವರು ಸಿಗಬಹುದು ಅಂದುಕೊಂಡು ಬಸ್ಸಿಗೆ ಕಾಯುತ್ತಾ ನಿಂತ ಒಂದು ಕ್ರಾಸಿನ ಹತ್ತಿರ.
ಆದರೆ ನಿಂತು ಬಹಳ ಸಮಯವಾದರೂ ಒಂದೂ ಬಸ್ ಬರಲಿಲ್ಲ ಮೆಜೆಸ್ಟಿಕ್ಕಿಗೆ ! ಬಹಳಶ್ಟು ಬಸ್
ಹೋದರೂ ಸಹ. ಒಂದು ಕಡೆ ಹಸಿವೆಯಾಗಿ ತಲೆ ಸುತ್ತುವ ಪರಿಸ್ಥಿತಿ,ಇನ್ನೊಂದು ಕಡೆ ಬಸ್
ಬರುತ್ತಿಲ್ಲ , ಹೇ ದೇವಾ ಏನಿದು ನಿನ್ನ ಲೀಲೆ ಅಂದುಕೊಂಡ.ಯಾರನ್ನೂ ನಂಬುವ ಸ್ಥಿತಿಯೂ
ಇಲ್ಲ,ಅಷ್ಟು ಹೆದರಿಕೆಯಾಗಿತ್ತು ಅವನಿಗೆ ಜನರ ಬಗ್ಗೆ.
ಮನಸ್ಸು ಹೆದರಿದರೂ
ಹೊಟ್ಟೆ ಕೇಳಬೇಕಲ್ಲಾ ! ಕೇಳಿದ ಅಲ್ಲೇ ಇದ್ದ ಒಂದು ಅಂಗಡಿಯಾತನನ್ನು " ಸಾರ್ ,
ಮೆಜೆಸ್ಟಿಕ್ಕಿಗೆ ಹೋಗುವ ಬಸ್ ಯಾವಾಗ ಬರುತ್ತೆ ". ಅಂಗಡಿಯಾತ ಅವನ ಬುಡದಿಂದ ತಲೆಯವರೆಗೆ
ನೋಡಿ "ಯೋ, ಯಾವನಯ್ಯಾ ಇವ್ನು,ಆವಾಗಿಂದ ನೋಡ್ತಾ ಇವ್ನಿ, ಎಲ್ಲಾ ಬಸ್ ನೋಡ್ತಿಯಾ,ಆದ್ರೆ
ಹೋಯ್ತಾ ಇಲ್ಲಾ, ಅಷ್ಟೊಂದು ಬಸ್ ಹೋದ್ವು ! " ಅಂದಾಗ ಇವನಿಗೆ ಆಶ್ಚರ್ಯ!!!
"ಇಲ್ಲಾ
ಸಾರ್,ಒಂದೂ ಹೋಗಿಲ್ಲ ,ಮೆಜೆಸ್ಟಿಕ್ಕಿಗೆ ,ಎಲ್ಲಾ ಬೇರೆದೇ ಬೋರ್ಡ್ ಇತ್ತು " ಅಂದರೆ
ಅಂಗಡಿಯವ "ಹಾಹಾ,ಇಲ್ಲಿಗೆ ಹೊಸಬನೇನೋ, ಎಲ್ಲಿಂದ ಬರ್ತಿರಪ್ಪಾ, ಥೂ ಹಳ್ಳಿ ಗಮಾರರು,
ನೋಡಿದ್ರೆ ವಿದ್ಯಾವಂತನ ತರ ಇದಿಯಾ !! ಯೋ, ಮೆಜೆಸ್ಟಿಕ್ಕೂ ,ಕೆಂಪೇಗೌಡ ಬಸ್ ನಿಲ್ದಾಣ
ಒಂದೇ ಕಣ್ಲಾ ! " ಅಂದ ಕೂಡಲೇ ಈ ಹುಡುಗ ತಲೆ ಸುತ್ತಿ ಅಲ್ಲೇ ಕುಸಿದ !!!!
No comments:
Post a Comment